ಉಡುಪಿ: ಉಡುಪಿ ನಗರವನ್ನು ಆನ್ ಪ್ಲ್ಯಾನ್ಡ್ ಸಿಟಿಯೆಂದು ಹೇಳಲಾಗುತ್ತದೆ. ಅದಕ್ಕೆ ಕಾರಣನೂ ಇದೆ. ಈ ಹಿಂದಿನ ಬಹುತೇಕ ಬಹು ಮಹಡಿ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೂಕ್ತವಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಕಟ್ಟಡ ನಿರ್ಮಾಣವಾಗಿರುತ್ತದೆ. ಇನ್ನುಳಿದಂತೆ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಕೂಡ ತೀರಾ ಕಡಿಮೆ. ಇನ್ನು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವ ಕುರಿತು ವೈಜ್ಞಾನಿಕವಾದ ಮಾರ್ಗೋಪಾಯಗಳು ಕೂಡ ಚರ್ಚೆಯಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಉಡುಪಿಯತ್ತ ಪ್ರವಾಸಿಗರ ದಂಡೇ ಆಗಮಿಸಲಾರಂಭಿಸಿದೆ. ಇದರ ಕಾರಣ ಸಹಜವಾಗಿ ಕಲ್ಸಂಕ ಜಂಕ್ಷನ್ ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ನಾಲ್ಕು ಕಡೆ ರಸ್ತೆಯಿರುವ ಕಾರಣ ಈ ಪ್ರದೇಶದಲ್ಲಿ ವಾಹನ ನಿಯಂತ್ರಣ ಟ್ರಾಫಿಕ್ ಪೊಲೀಸರಿಗೆ ದುಸ್ತರವಾಗಿತ್ತು. ಆ ಸಮಯದಲ್ಲಿ ಪೊಲೀಸ್ ಇಲಾಖೆ ಕಲ್ಸಂಕ ಜಂಕ್ಷನ್ ಬಂದ್ ಮಾಡಿ ಕಡಿಯಾಳಿ ಮತ್ತು ಸಿಟಿ ಬಸ್ ಸ್ಟ್ಯಾಂಡ್ ಬಳಿ ವಾಹನ ತಿರುವಿಗೆ ಅನುವು ಮಾಡಿಕೊಡಲಾಯಿತು. ನಂತರ ಈ ಕ್ರಮದ ಕುರಿತು ಸಾರ್ವಜನಿಕರು, ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು. ಸಹಜವಾಗಿ ಕಿರಿಕಿರಿಯೆನಿಸುವ ಈ ಕ್ರಮ ವಿಶ್ಲೇಷಣೆಗೆ ಈಡಾಯಿತು. ನಂತರ ಉಡುಪಿ ಶಾಸಕರು ಈ ಪ್ರದೇಶದಲ್ಲಿ ಫ್ಲೈ ಒವರ್ ಮಾಡುವುದಾಗಿ ಹೇಳಿಕೆಯೊಂದನ್ನು ಬಿಟ್ಟರು.
ಇದರ ನಡುವೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಕಲ್ಸಂಕ ಜಂಕ್ಷನ್ ಮುಚ್ಚುವ ಕಾರ್ಯವನ್ನು ವಾರಾಂತ್ಯಕ್ಕೆ ಮಾತ್ರ ಮೀಸಲಿಟ್ಟಿತ್ತು. ಅದು ಈಗಿನವರೆಗೂ ಮುಂದುವರಿದಿದೆ. ಈಗಿರುವ ಪ್ರಶ್ನೆ ಈ ಕ್ರಮದಿಂದ ವಾಹನ ನಿರ್ವಹಣೆ ಸಾಧ್ಯವಾಗಿದೆಯೇ ಎಂಬ ಪ್ರಶ್ನೆ. ಇದಕ್ಕೆ ಉತ್ತರ ಹುಡುಕಿದಾಗ ವಾಹನ ದಟ್ಟಣೆ ಕಲ್ಸಂಕ ಜಂಕ್ಷನ್ ನಿಂದ ಸಿಟಿ ಬಸ್'ಸ್ಟ್ಯಾಂಡ್ ಮತ್ತು ಕಡಿಯಾಳಿ ಪ್ರದೇಶಕ್ಕೆ ಶಿಫ್ಟ್ ಆಗಿದೆ. ಈ ಪ್ರದೇಶದಲ್ಲಿ ವಾಹನಗಳು ಯೂಟರ್ನ್ ಹೊಡೆಯುವಾಗ ಸಹಜವಾಗಿ ಟ್ರಾಫಿಕ್ ಜಾಮ್ ಆಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿರುವುದು ಮಾತ್ರ ತಪ್ಪಿಲ್ಲ!.
ಇದಕ್ಕೆ ಶಾಶ್ವತ ಪರಿಹಾರ ಕೈಕೊಳ್ಳುವುದು ಸರಕಾರದ ಕೆಲಸ. ಈ ಪ್ರದೇಶದಲ್ಲಿ ವೈಜ್ಞಾನಿಕ ಅಧ್ಯಯನವೊಂದು ನಡೆದು ನಗರ ಪ್ರದೇಶದ ವಾತಾವರಣಕ್ಕೆ ಧಕ್ಕೆಯಾಗದಂತೆ ವಾಹನ ನಿರ್ವಹಣೆಗೆ ವೈಜ್ಞಾನಿಕ ಕ್ರಮವೊಂದನ್ನು ಕೈಗೊಳ್ಳಬೇಕಾಗಿದೆ.
ವಿಫಲವಾದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ:
ನಗರದ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿ ವಾಹನ ನಿರ್ವಹಣೆಗೆ ಪ್ರಯತ್ನ ನಡೆಸಲಾಯಿತು. ಆದರೆ ಅದು ಸಂಪೂರ್ಣವಾಗಿ ವಿಫಲವಾಗಿದೆ. ಸರಿಯಾದ ಅಧ್ಯಯನ ನಡೆಸದೆ ಯೋಜನೆ ಅನುಷ್ಠಾನಕ್ಕೆ ಹೋಗಿ ಸಾರ್ವಜನಿಕ ಹಣ ಪೋಲಾಗಿದೆ. ಇದೀಗ ಟ್ರಾಫಿಕ್ ಸಿಗ್ನಲ್ ಪೋಲ್ ಗಳು ಜಾಹೀರಾತು ಫಲಕಗಳಾಗಿ ಬದಲಾಗಿದೆ.
ಮಣಿಪಾಲ ಜಂಕ್ಷನ್ ನಲ್ಲಿ ಸ್ವಲ್ಪ ದಿನ ಕಾರ್ಯ ನಿರ್ವಹಿಸಿದ ಸಿಗ್ನಲ್ ಗಳು ಇದೀಗ ಕೆಲಸಕ್ಕೆ ಬಾರದಂತಾಗಿದೆ. ಪಿಪಿಸಿ ಬಳಿಯಂತೂ ಹಲವು ಸಮಯ ಸಿಗ್ನಲ್ ಪಿಲ್ಲರ್ ಗಳು ರಸ್ತೆಯಲ್ಲೇ ಇದ್ದು ನಂತರ ಸಾರ್ವಜನಿಕರ ಆಕ್ರೋಶದ ನಂತರ ತೆರವುಗೊಳಿಸಲಾಗಿತ್ತು.
ಹದೆಗೆಟ್ಟಿರುವ ರಸ್ತೆಗಳು:
ಇನ್ನು ನಗರ ಪ್ರದೇಶಗಳಲ್ಲಿನ ಹಲವು ರಸ್ತೆಗಳು ಹದೆಗೆಟ್ಟಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಕೆಲವೊಂದು ರಸ್ತೆಗಳು ತೀರಾ ಇತ್ತೀಚೆಗೆ ನಿರ್ಮಾಣವಾಗಿದ್ದರೂ ಈ ಬಾರಿಯ ಮಳೆಗೆ ಹೊಂಡಮಯವಾಗಿದೆ.