ಉಡುಪಿ | ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯಡಿಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಡುಪಿ ಜಿಲ್ಲಾ ಸಮಿತಿ ದ್ವಿತೀಯ ಜಿಲ್ಲಾ ಸಮ್ಮೇಳನವು ಇಂದು ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆಯಿತು.
ಪ್ರಜಾಪ್ರಭುತ್ವ, ಸಮಾನತೆ, ಮಹಿಳಾ ವಿಮೋಚನೆಯ ಗುರಿಗಳನ್ನು ಹೊಂದಿರುವ ಜನವಾದಿ ಮಹಿಳಾ ಸಂಘಟನೆಯ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷೆ ಸರೋಜಾ ನೆರವೇರಿಸಿದರು.
ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ಲಕ್ಷ್ಮಿಯವರು ಈ ಕಾಲಾವಧಿಯಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಮಹಿಳೆಯರ ಘನತೆಯ ಮೇಲೆ ಹೇಗೆಲ್ಲಾ ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಮಾತನಾಡುತ್ತಾ, ಅಸಮಾನತೆ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಾನತೆಗಾಗಿಗಿನ ಹೋರಾಟವನ್ನು ಬಲಗೊಳಿಸುವ ಜವಾಬ್ದಾರಿಯನ್ನು ಎಲ್ಲರು ನಿರ್ವಹಿಸಬೇಕಿದೆ ಎಂದರು.
ಇನ್ನೋರ್ವ ಅತಿಥಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿಯವರು ಮಹಿಳೆಯರ ಸುರಕ್ಷತೆ ಆಳುವ ಸರ್ಕಾರಗಳಿಗೆ ಆದ್ಯತೆಯಾಗುತ್ತಿಲ್ಲ.ಮಹಿಳೆಯರ ಕುರಿತಾದ ಜನಪ್ರತಿನಿಧಿಗಳ ಮನೋಭಾವ ಬದಲಾಗಬೇಕು. ಅಸಹಜ ಸಾವುಗಳ ಪ್ರಕರಣಗಳ ಕುರಿತಾದ ಎಸ್ ಐ ಟಿ ತನಿಖೆಯ ವ್ಯಾಪ್ತಿಗೆ ಸೌಜನ್ಯ ಪ್ರಕರಣವನ್ನು ತರಬೇಕೆಂದು ಒತ್ತಾಯಿಸಿದರು.
ಸಮ್ಮೇಳನಕ್ಕೆ ಶುಭ ಕೋರಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಇಂದಿನ ಪ್ರಸಕ್ತ ಸವಾಲುಗಳನ್ನು ಎದುರಿಸಲು ಮಹಿಳಾ ಚಳುವಳಿಯನ್ನು ಬಲಪಡಿಸಿದರೆ ಮಹಿಳೆಯರಿಗೆ ನ್ಯಾಯ ಸಿಗಲು ಸಾಧ್ಯ ದುಡಿಯುವ ಜನರ ಚಳುವಳಿಗಳನ್ನು ತೀವ್ರಗೊಳಿಸಿದಾಗ ಮಹಿಳೆಯರು ಆರ್ಥಿಕ ಸಬಲರಾಗಲು ಸಾಧ್ಯವಿದೆ ಅನ್ಯಾಯ ಎದುರಿಸಿ ನ್ಯಾಯ ಕೊಡಿಸಲು ಪ್ರತಿಯೊಬ್ಬರೂ ನಿಲ್ಲಬೇಕಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಮುಖಂಡರಾದ ಚಂದ್ರಶೇಖರ್ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಸರೋಜಾವರು ವಹಿಸಿದ್ದರು. ನಿರೂಪಣೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶೀಲಾವತಿಯವರು ಮಾಡಿದರು, ಸುಮನಾ ನಾಡಾವರು ವಂದಿಸಿದರು ಸುಶೀಲಾ ಉಪ್ಪುಂದ ಸ್ವಾಗತಿಸಿದರು .
ಜಿಲ್ಲೆಯ ವಿವಿಧ ವಲಯಗಳಿಂದ ಮಹಿಳಾ ಪ್ರತಿನಿಧಿಗಳು ಭಾಗವಹಿಸಿ ಜಿಲ್ಲೆಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಸೌಜನ್ಯ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು.
ಇದೇ ಸಂದರ್ಭದಲ್ಲಿ 23 ಸದಸ್ಯರ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಸರೋಜಾವರು ಕಾರ್ಯದರ್ಶಿಯಾಗಿ ಶೀಲಾವತಿಯವರು, ಖಜಾಂಚಿಯಾಗಿ ಲಲಿತಾವರು ಆಯ್ಕೆಯಾಗಿರುವರು.